ಸಶಕ್ತ ಸಮಾಜದ ನಿರ್ಮಾಣ

   ಶ್ರೀಗಂಧ ಫೌಂಡೇಶನ್ (ರಿ)
Email: support@shrigandhafoundation.org
    
          English  
    
.    ಸುದ್ದಿ    ಸಿ ಎಸ್ ಆರ್    ದೇಣಿಗೆ    ಕೈಜೋಡಿಸಿ
    .   .   .   .
 
ಶ್ರೀಗಂಧ ವಿದ್ಯಾನಿಧಿ ವಾರ್ಷಿಕ ವೇದಿಕೆ 2025
 
ಪ್ರತಿ ವರ್ಷದಂತೆ, ಕಳೆದ ಭಾನುವಾರ ಅಕ್ಟೋಬರ್ 26ನೇ ತಾರೀಕು ನಮ್ಮ ಶ್ರೀಗಂಧ ಫೌಂಡೇಶನ್ ನ ವಿದ್ಯಾರ್ಥಿಗಳು, ದಾನಿಗಳು ಹಾಗು ಯೋಧರ ವಾರ್ಷಿಕ ಸಂಭ್ರಮವಾದ ಶ್ರೀಗಂಧ ವಿದ್ಯಾನಿಧಿ ಸಮ್ಮಿಲನ ಬೆಂಗಳೂರಿನ ಅಬಲಾಶ್ರಮದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಸುಮಾರು 200 ಕ್ಕೂ ಹೆಚ್ಚಿನ ಜನರು ಸೇರಿದ್ದ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗೌರವಾನ್ವಿತ ಅತಿಥಿಗಳಾದ ದೀಪಕ್ ಪ್ರಭು ಮಟ್ಟಿ, ಸತ್ಯೇಶ್ ಬೆಳ್ಳೂರು, ಗುರುಪ್ರಸಾದ್ ಭಟ್ ಅವರುಗಳು ಸೇವಾ ಪ್ರವೃತ್ತಿ, ಧನಾತ್ಮಕ ಚಿಂತನೆ, ಪ್ರಸ್ತುತ ವಿದ್ಯಮಾನಗಳು, ವಿದ್ಯಾರ್ಥಿಗಳ ಮುಂದಿನ ಸವಾಲುಗಳು ಮತ್ತು ಮಾರ್ಗೋಪಾಯಗಳ ಬಗ್ಗೆ ಹಲವಾರು ಉಪಯುಕ್ತ ಮಾಹಿತಿ ನೀಡಿ, ಶ್ರೀಗಂಧ ಫೌಂಡೇಶನ್ ನ ಕಾರ್ಯವನ್ನು ತುಂಬು ಹೃದಯದಿಂದ ಶ್ಲಾಘಿಸಿದರು.

ಕರ್ನಾಟಕದಾದ್ಯಂತ ಇದುವರೆಗೂ ಶ್ರೀಗಂಧ ಫೌಂಡೇಶನ್ ವತಿಯಿಂದ ಅನುಕೂಲ ಪಡೆದಿರುವ ಫಲಾನುಭವಿ ಮಕ್ಕಳ ಸಂಖ್ಯೆ ಸುಮಾರು 140.

ನಮ್ಮ ಹಲವಾರು ವಿದ್ಯಾರ್ಥಿಗಳು ತಮ್ಮ ಬದುಕಿನ, ಬಾಲ್ಯ ಜೀವನದ, ನಿರಂತರ ಹೋರಾಟದ ಮತ್ತು ತಮ್ಮ ಯಶಸ್ಸಿನ, ಶ್ರೀಗಂಧ ಕುಟುಂಬದ ಸಹಾಯದ ಪುಟಗಳನ್ನು ಒಂದೊಂದಾಗಿ ವರ್ಣಿಸಿದಾಗ ಅಲ್ಲಿದ್ದ ಎಲ್ಲರ ಮೈ ಮನಗಳಲ್ಲಿ ರೋಮಾಂಚನವಾದದ್ದು ಸುಳ್ಳಲ್ಲ.

ಇವರಲ್ಲಿ ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಸೇರಿರುವ 22 ಮಕ್ಕಳಿಗೆ ಶ್ರೀಗಂಧ ಫೌಂಡೇಶನ್ ಕಡೆಯಿಂದ ಗೌರವಿಸಿ ಸನ್ಮಾನಿಸಲಾಯಿತು. ನಮ್ಮೆಲ್ಲರಿಗೂ ಇದೊಂದು ನಿಜಕ್ಕೂ ಅತ್ಯಂತ ಅವಿಸ್ಮರಣೀಯ ಕ್ಷಣ.

ಈ ಮಕ್ಕಳು ಕೂಡ ತಮಗೆ ಬರುತ್ತಿರುವ ವೇತನದ ಒಂದು ಪುಟ್ಟ ಭಾಗವನ್ನು ಶ್ರೀಗಂಧ ಫೌಂಡೇಶನ್ ಗೆ ದೇಣಿಗೆ ನೀಡಿ, ಉಳಿದ ಮಕ್ಕಳ ವಿದ್ಯಾಭ್ಯಾಸಕ್ಕೆ ಟೊಂಕ ಕಟ್ಟಿ ನಿಂತಿರುವುದು ಶ್ಲಾಘನೀಯ.

ದಾನಿಗಳಿಂದ ಸಂಗ್ರಹಿಸಿದ್ದ ಸುಮಾರು ರೂ.25,000 ಬೆಲೆ ಬಾಳುವ 300 ಕ್ಕೂ ಹೆಚ್ಚಿನ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಮರುಬಳಕೆಯ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಹಂಚಲಾಯಿತು.

ಈ ಪರಿಸರ ಸ್ನೇಹಿ ಕಾರ್ಯಕ್ರಮದಲ್ಲಿ ಲಘು ಉಪಹಾರ ಮತ್ತು ಭೋಜನದ ವ್ಯವಸ್ಥೆಯನ್ನೂ ಒಳಗೊಂಡು, ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಮರುಬಳಕೆ ಮಾಡುವ ಬಟ್ಟೆಯ ಬ್ಯಾಗುಗಳನ್ನು ನಮ್ಮ ದಾನಿಗಳಿಗೆ ವಿತರಿಸಲಾಯಿತು.

ಶ್ರೀಗಂಧ ಫೌಂಡೇಶನ್ ನ ದಾನಿಗಳನ್ನು ಗೌರವಯುತವಾಗಿ ಸನ್ಮಾನಿಸಲಾಯಿತು. ಶ್ರೀಗಂಧ ಫೌಂಡೇಶನ್ ನ ಪ್ರತಿಯೊಂದು ಕಾರ್ಯಕ್ರಮವನ್ನು ಯಶಸ್ವಿ ಆಗುವಂತೆ ಅನುಗ್ರಹಿಸಿ, ಹಾರೈಸಿ, ಪೋಷಿಸಿ, ಬೆಳೆಸುತ್ತಿರುವ ನಮ್ಮ ಹಿಂದಿನ ಶಕ್ತಿ ನೀವುಗಳು. ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಕೈಗಳಿಗೆ, ಮನಗಳಿಗೆ ನಮ್ಮೆಲ್ಲರ ವಿನಮ್ರ ನಮನಗಳು..


     
                                                                   ಹಕ್ಕು ನಿರಾಕರಣೆ    ಸೇವಾ ನಿಯಮಗಳು     
           
ವೀಕ್ಷಕರು : 58585
ನೋಂದಣಿ ಸಂಖ್ಯೆ: DARPAN REG ID - KA/2022/0318919
ಹಕ್ಕುಸ್ವಾಮ್ಯ © 2022 ಶ್ರೀಗಂಧ ಫೌಂಡೇಶನ್ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ